ಮಾನಜೈóಟ್
ಹಳದಿ ಇಲ್ಲವೆ ಕಂದು ಬಣ್ಣದ, ವಿರಳಭಸ್ಮ ಫಾಸ್ಫೇಟ್ ಮಾನೊಕ್ಲಿನಿಕ್ ಖನಿಜ. ಸೀರಿಯಮ್ ಮತ್ತು ಲ್ಯಾಂಥನಮ್ ಧಾತುಗಳ ಫಾಸ್ಫೇಟ್  (Ce, La) PO4]. ವಿರಳಭಸ್ಮಧಾತುಗಳ ಸ್ಥಾನವನ್ನು ಥೋರಿಯಮ್, ಫಾಸ್ಫರಸ್ ಸ್ಥಾನವನ್ನು ಸಿಲಿಕಾನ್ ಸಾಕಷ್ಟು ಪ್ರತಿಸ್ಥಾಪಿಸಿವೆ. ಈ ಖನಿಜಕ್ಕೆ ಕ್ರಿಪ್ಟೊಲೈಟ್ ಎಂಬ ಹೆಸರೂ ಉಂಟು. ಗ್ರೀಕ್ ಭಾಷೆಯಲ್ಲಿ ಒಂಟಿ ಎಂದು ಅರ್ಥಬರುವ ಮಾನಜೆóನ್ ಎಂಬ ಪದವನ್ನು ಆಧರಿಸಿ, ಮೊದಲಿಗೆ ಅತಿ ವಿರಳವಾಗಿ ದೊರೆಯುತ್ತಿದ್ದ ಈ ಖನಿಜಕ್ಕೆ ಬ್ರೈತ್‍ಹೌಪ್ಟ್ ಎಂಬ ಭೂ ವಿಜ್ಞಾನಿ ಮಾನಜೈóಟ್ ಎಂಬ ಹೆಸರಿಟ್ಟ (1829). ಹಸುರು ಬಣ್ಣದ ಮಾನಜೈóಟ್‍ಗೆ ಚೇರ್ಲೈಟ್ ಎಂದು ಹೆಸರು. ಇದು ಮೇಣವನ್ನು ಹೋಲುತ್ತದೆ.

ಮಾನಜೈóಟ್ ಏಕಚಕ್ರೀಯ ವರ್ಗದಲ್ಲಿ (ಮಾನೊಕ್ಲಿನಿಕ್) ಸ್ಫಟಿಕೀಕರಿಸುತ್ತದೆ. ಇದರ ಸ್ಫಟಿಕಗಳು ಅಶ್ರಗ ಮತ್ತು ಪಿರಮಿಡ್ ಆಕಾರಗಳನ್ನು ತಳೆದಿರುತ್ತವೆ. ಅಶ್ರಗ ಮುಖಕ್ಕೆ ಸಮಾಂತರವಾದ ಪದರಗಳು (ಕ್ಲಿವೇಜಸ್) ಮಾತ್ರ ಪ್ರಧಾನ. ಖನಿಜದ ಸಾಪೇಕ್ಷ ಸಾಂದ್ರತೆ 4.9-5.5ರವರಗೆ; ಕಾಠಿಣ್ಯ 5-5.5ರವರೆಗೆ.

ರಾಸಾಯನಿಕ ರಚನೆ: ವಿರಳಭಸ್ಮಲೋಹಧಾತುಗಳಾದ ಸೀರಿಯಮ್ ಮತ್ತು ಲ್ಯಾಂಥನಮ್‍ಗಳ ಫಾಸ್ಫೇಟ್ ಆಗಿರುವ ಈ ಖನಿಜದಲ್ಲಿ ಯೆಟ್ರಿಯಮ್ ಮತ್ತು ಜಿóರ್‍ಕೋನಿಯಮ್‍ಗಳ ಲೋಹಗಳು ಅಲ್ಪ ಪ್ರಮಾಣದಲ್ಲಿರಬಹುದು. ಥೋರಿಯಮ್ ಮತ್ತು ಯುರೇನಿಯಮ್ ಅಣುಗಳು ಸೀರಿಯಮ್ ಅಣುಗಳನ್ನು ಸ್ಥಾನಾಂತರಿಸಬಹುದು. 3%-18% ಥೋರಿಯಮ್ ಮತ್ತು 1% ರವರೆಗೆ ಯುರೇನಿಯಮ್ ಆಕ್ಸೈಡುಗಳನ್ನು ಒಳಗೊಂಡಂಥ ಖನಿಜ ವಿಕಿರಣಪಟುತ್ವ ಪ್ರದರ್ಶಿಸಬಲ್ಲುದು.

ಉಗಮ : ಅಂತರಾಗ್ನಿಶಿಲೆಗಳಿಂದ (ಪ್ಲೂಟಾನಿಕ್ ರಾಕ್ಸ್) ಗ್ರೈನೈಟ್, ಸೈನೈಟ್ ಮತ್ತು ಕಾರ್ಬಾನಟೈಟ್‍ಗಳಲ್ಲೂ ಮಧ್ಯಾಂತರ ಶಿಲೆಗಳಾಗಿರುವ ಪೆಗ್ಮೆಟೈಟುಗಳಲ್ಲೂ ರೂಪಾಂತರಿತ ಶಿಲೆಗಳಾದ (ಮೆಟಮಾರ್ಫಿಕ್‍ರಾಕ್ಸ್) ನೈಸ್ ಮತ್ತು ಷಿಪ್ಟ್‍ಗಳಲ್ಲೂ ಅವಸಾದನ ಶಿಲೆಗಳಾದ (ಸೆಡಿಮೆಂಟರಿ ರಾಕ್ಸ್) ಮರಳು ಶಿಲೆ, ಜೇಡಿಶಿಲೆ (ಷೇಲ್) ಮತ್ತು ಉಂಡೆಶಿಲೆಗಳಲ್ಲೂ ಮಾನಜೈóಟ್ ಅಲ್ಪ ಪ್ರಮಾಣದಲ್ಲಿ, ಪ್ರಪಂಚದ ನಾನಾ ಭಾಗಗಳಲ್ಲಿ ದೊರೆಯುತ್ತದೆ. ಭಾರತದ ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿಯ ಚಾರ್ನಕೈಟ್ ಮತ್ತು ಖಾಂಡೊಲೈಟ್ ಎಂಬ ರೂಪಾಂತರಿತ ಶಿಲೆಗಳು ಈ ಖನಿಜದ ತವರು. ಒಂದು ಗ್ರಾಮ್‍ನಿಂದ ಎರಡು ಕಿಲೋಗ್ರಾಮ್ ತೂಕದ ಹರಳುಗಳು ಒಮ್ಮೊಮ್ಮೆ ಅಭ್ರಕದ ದಾಸ್ತಾನು ಎನಿಸಿರುವ ಪೆಗ್ಮೆಟೈಟ್‍ಗಳಲ್ಲಿ ಸೇರಿರುತ್ತವೆ. ಇಂಥವು ಭಾರತದ ಬಿಹಾರ, ರಾಜಸ್ತಾನ, ಆಂಧ್ರಪ್ರದೇಶ ಮತ್ತು ಕರ್ನಾಟಕಗಳಲ್ಲಿ ದೊರೆಯುತ್ತವೆ.
ನಿಕ್ಷೇಪಗಳ ರೂಪಣೆ: ವಿವಿಧ ಶಿಲೆಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸೇರಿಕೊಂಡಿರುವ ಮಾನಜೈóಟನ್ನು ಬೇರ್ಪಡಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲ. ನೈಸರ್ಗಿಕ ಬಲಗಳ ಸಹಾಯದಿಂದ, ತಂತಾನೇ ಶಿಲೆಗಳಿಂದ ಬೇರ್ಪಟ್ಟು ಅನುಕೂಲ ಕ್ಷೇತ್ರಗಳಲ್ಲಿ ಮಾತ್ರ ಇತರ ಭಾರ ಖನಿಜಗಳೆನಿಸಿರುವ ಇಲ್ಮೆನೈಟ್, ರೂಲೈಟ್, ಲ್ಯೂಕಾಕ್ಸೀನ್, ಜಿóರಾಕಾನ್, ಸಿಲಿಮನೈಟ್ ಮತ್ತು ಗಾರ್ನೆಟ್‍ಗಳ ಜೊತೆಯಲ್ಲಿ ಒಳನಾಡು ಮೆಕ್ಕಲು ಮಣ್ಣಿನಲ್ಲಿಯೊ ಕಡಲತೀರದ ಮರಳಿನಲ್ಲಿಯೊ ಶೇಖರಗೊಳ್ಳುತ್ತದೆ. ಈ ಬಗೆಯ ನಿಕ್ಷೇಪಗಳಿಗೆ ಒಳನಾಡು ಮತ್ತು ಕಡಲತೀರದ ಪ್ಲೇಸರ್‍ಗಳು ಎಂದು ಹೆಸರು. ಒಳನಾಡಿನ ಪ್ಲೇಸರ್ ನಿಕ್ಷೇಪಗಳು, ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಾಂಟಾನ ಮತ್ತು ಇಡಾಹೋ ರಾಜ್ಯಗಳಲ್ಲೂ ತವರದ (ಟಿನ್‍ಪ್ಲೇಸರ್) ಜೊತೆಯಲ್ಲಿ ಮಲೇಷ್ಯ ಮತ್ತು ಬಂಗಾಲದ ಪುರೂಲಿಯ ಪಟ್ಟಣಗಳ ಮಧ್ಯೆ ಇರುವ ಪ್ರಸ್ಥಭೂಮಿಯಲ್ಲೂ ದೊರೆಯುತ್ತವೆ.

ಆರ್ಥಿಕ ಪ್ರಾಮುಖ್ಯ ಪಡೆದ ಕಡಲ ತೀರದ ಪ್ಲೇಸರ್ ನಿಕ್ಷೇಪಗಳು ಬ್ರಜಿóಲಿನ ರಯೋಡಿ ಜಿನೈರೋ, ಎಸ್ಟರ್ಯಾಂಟೋ ಮತ್ತು ಬಹಯ್ಯ ತೀರ ಪ್ರದೇಶಗಳು; ಅಮೆರಿಕ ಸಂಯುಕ್ತ ಸಂಸ್ಥಾನಗಳ ಫ್ಲಾರಿಡ ರಾಜ್ಯ ತೀರ ಪ್ರದೇಶ; ಆಸ್ಟ್ರೇಲಿಯ ಖಂಡದ ಕ್ವೀನ್ಸ್‍ಲೆಂಡ್ ಮತ್ತು ನ್ಯೂ ಸೌತ್‍ವೇಲ್ಸ್‍ಗಳ ತೀರಪ್ರದೇಶಗಳು; ಭಾರತದ ಪಶ್ಚಿಮ ಕರಾವಳಿ, ಕೇರಳ ರಾಜ್ಯ ಮತ್ತು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲೂ ಕಾಣಬರುತ್ತವೆ. ಪೂರ್ವ ಕರಾವಳಿಯಲ್ಲಿ ಒರಿಸ್ಸದ ಗಂಜಾಮ್ ಜಿಲ್ಲೆಯಲ್ಲೂ ಆಂಧ್ರಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರೀ ಜಿಲ್ಲೆಗಳಲ್ಲೂ ಹಲವಾರು ನಿಕ್ಷೇಪಗಳು ಈಚೆಗೆ ಪತ್ತೆಯಾಗಿವೆ. ಇವಲ್ಲದೆ ಕನ್ಯಾಕುಮಾರಿ ಜಿಲ್ಲೆಯ ಪೂರ್ವತೀರದ ಸಮೀಪದಲ್ಲಿರುವ ಮರಳು ಗುಡ್ಡೆಗಳಲ್ಲಿಯೂ ಮಾನಜೈóಟ್ ನಿಕ್ಷೇಪಗಳಿರುವುದು ಕಂಡುಬಂದಿದೆ.

ಭಾರತದ ಮಾನಜೈóಟಿನಲ್ಲಿ ಸರಾಸರಿ 9%ರಷ್ಟು ಥೋರಿಯಮ್ ಆಕ್ಸೈಡ್ ಮತ್ತು 0.25%-0.30%ರವರೆಗೆ ಯುರೇನಿಯಮ್ ಆಕ್ಸೈಡುಗಳಿರುತ್ತವೆ. ಭಾರತದಲ್ಲಿ ಸುಮಾರು ನಲವತ್ತು ಲಕ್ಷ ಟನ್ ಮಾನಜೈóಟ್ ಉಳ್ಳ ನಿಕ್ಷೇಪಗಳಿವೆಯೆಂದು ಪರಮಾಣುಶಕ್ತಿ ಖನಿಜ ಇಲಾಖೆಯವರು ಅಂದಾಜು ಮಾಡಿದ್ದಾರೆ.

ಉಪಯೋಗಗಳು: ಮಾನಜೈóಟ್ ಸೀರಿಯಮ್ ಮತ್ತು ಥೋರಿಯಮ್‍ಗಳಿಂದ ಕೂಡಿರುವುದರಿಂದ ಗಾಜು, ಸಿಗರೇಟ್ ಹೊತ್ತಿಗೆಗಳು, ಜಾಡು ನಿರ್ದೇಶನ ತೋಟಾಗಳ ತಯಾರಿಕೆಯಲ್ಲಿ ಉಪಯೋಗವಾಗುವುದು. ಅಲ್ಯುಮಿನಿಯಮ್ಮಿನ ಜೊತೆ ಮಿಶ್ರಮಾಡಲು ಇದನ್ನು ಬಳಸುವುದಿದೆ.

ಪರಮಾಣುಶಕ್ತಿಯ ಉತ್ಪಾದನೆಯಲ್ಲಿ ಥೋರಿಯಮ್‍ಯುಕ್ತ ಮಾನಜೈóಟ್ ಬಲು ಉಪಯುಕ್ತ ವಸ್ತು. ಭೂಮಿಯ ಪ್ರ್ರಾಯವನ್ನು ಅಂದಾಜು ಮಾಡುವಲ್ಲಿ ಕೂಡ ಮಾನಜೈóಟಿನ ಬಳಕೆ ಉಂಟು.
(ಸಿ.ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ